ಫಲ್ಯಾಂಜರ್ -
ಸ್ತನಿವರ್ಗದ ಮಾಸ್ರ್ಯುಪಿಯೇಲಿಯ ಗಣದ ಫಲ್ಯಾಂಜರಿಡೀ ಕುಟುಂಬಕ್ಕೆ ಸೇರಿದ ಹಲವಾರು ಜಾತಿಯ ಪ್ರಾಣಿಗಳಿಗೆ ಇರುವ ಸಾಮಾನ್ಯ ಹೆಸರು. ಆಸ್ಟ್ರೇಲಿಯ, ಟಾಸ್ಮೇನಿಯ, ನ್ಯೂಗಿನಿ, ಸೆಲೆಬಸ್, ಟೀಮಾರ್, ಸೇರಾಮ್, ಸಾಲೋಮನ್ ದ್ವೀಪಸ್ತೋಮ ಮುಂತಾದೆಡೆಗಳಲ್ಲೆಲ್ಲ ವ್ಯಾಪಕವಾಗಿ ಕಾಣಬರುವ ಸುಮಾರು 17 ಜಾತಿಗಳು ಈ ಕುಟುಂಬಕ್ಕೆ ಸೇರಿ ಇವೆಲ್ಲಕ್ಕೂ ಸ್ಥೂಲಾರ್ಥದಲ್ಲಿ ಈ ಹೆಸರು ಬಳಕೆಯಾಗುತ್ತಿದೆ. ಆದರೆ ನಿಷ್ಕøಷ್ಟವಾಗಿ ಆಸ್ಟ್ರೇಲಿಯ ಹಾಗೂ ಟಾಸ್ಮೇನಿಯಗಳಲ್ಲಿ ವಾಸಿಸುವ ಟ್ರೆಕೊಸ್ಯೂರಸ್ ವಲ್ಪಿಕ್ಯುಲ ಎಂಬ ಪ್ರಭೇದ, ನ್ಯೂಗಿನಿ ನಿವಾಸಿಯಾದ ಡಿಸ್ಟೀಕ್ಯೂರಸ್ ಪೆನ್ನೇಟಸ್ ಪ್ರಭೇದ ಹಾಗೂ ನ್ಯೂಗಿನಿ, ಸೆಲೆಬಸ್, ಸಾಲೋಮನ್ ದ್ವೀಪಸ್ತೋಮ ಮುಂತಾದೆಡೆಗಳಲ್ಲಿ ವಾಸಿಸುವ ಫಲ್ಯಾಂಜರ್ ಮ್ಯಾಕ್ಯುಲೇಟಸ್ ಎಂಬವುಗಳಿಗೆ ಈ ಹೆಸರು ಹೆಚ್ಚು ಬಳಕೆಯಲ್ಲಿದೆ. ಕೊನೆಯಲ್ಲಿ ಹೆಸರಿಸಿದ ಪ್ರಭೇದಕ್ಕೆ ಕಸ್ಕಸ್ ಎಂಬು ಹೆಸರೂ ಉಂಟು

	ಫಲ್ಯಾಂಜರುಗಳ ಸ್ವಾಭಾವಿಕ ಆವಾಸ ಸಮುದ್ರ ಮಟ್ಟದಿಂದ ಹಿಡಿದು 4000 ಮೀ ಎತ್ತರದವರೆಗಿನ ಪ್ರದೇಶಗಳ ದಟ್ಟಕಾಡು. ಇಂಗ್ಲೆಂಡಿನ ಅನ್ವೇಷಕ ಕ್ಯಾಪ್ಟನ್ ಜೇಮ್ಸ್ ಕುಕ್ ಆಸ್ಟ್ರೇಲಿಯದ ಕುಕ್‍ಟೌನಿನಲ್ಲಿ ಈ ಕುಟುಂಬದ ಸ್ಯೂಡೂಕೈರಸ್ ಪ್ರಭೇದವನ್ನು ಕಂಡಾಗ, ಅದಕ್ಕೂ ಉತ್ತರ ಅಮೆರಿಕದ ಒಪಾಸಮ್‍ಗಳಿಗೂ ಇರುವ ಮೇಲು ಮೇಲಿನ ಹೋಲಿಕೆಯನ್ನು ಗಮನಿಸಿ ಅದನ್ನೂ ಒಪಾಸಮ್ ಎಂದೆ ಹೆಸರಿಸಿದ. ಆದರೆ ಆಸ್ಟ್ರೇಲಿಯದ ಫಲ್ಯಾಂಜರಿಗೂ (ಕುಟುಂಬ ಫಲ್ಯಾಂಜರಿಡೀ) ಅಮೆರಿಕದ ಒಪಾಸಮಿಗೂ (ಕುಟುಂಬ ಡೈಡೆಲ್ಫಿಡೀ) ಹಲವಾರು ವ್ಯತ್ಯಾಸಗಳಿವೆಯಾಗಿ ಫಲ್ಯಾಂಜರುಗಳಿಗೆ ಬರಿಯ ಪಾಸಮ್ ಎಂಬ ಹೆಸರನ್ನು ಈಗ ಬಳಸಲಾಗುತ್ತಿದೆ.

	ಫಲ್ಯಾಂಜರುಗಳು ನೋಡಲು ಇಲಿಗಳಂತೆ, ಅಳಿಲಿನಂತೆ ಇಲ್ಲವೆ ಲೀಮರಿನಂತೆ ಇವೆ. ವಯಸ್ಕಜೀವಿಗಳ ಸರಾಸರಿ ಉದ್ದ 120-1200 ಮಿಮೀ ವರೆಗೆ ವ್ಯತ್ಯಾಸವಾಗುತ್ತದೆ. ಮೈಮೇಲೆ ದಟ್ಟವಾದ ಉಣ್ಣೆಯಂಥ ತುಪ್ಪುಳು ಉಂಟು, ಮೈ ಬಣ್ಣ ಬಿಳಿ, ಬೂದು, ಕೆಂಪು, ಕಂದು ಇತ್ಯಾದಿ, ಬಾಲ ಉದ್ದವಾಗಿದ್ದು (ಸರಾಸರಿ ಉದ್ದ 240-610 ಮಿಮೀ) ಹಲವಾರು ಪ್ರಭೇದಗಳಲ್ಲಿ ಆಸರೆಗಳ ಸುತ್ತ ಸುತ್ತಿ ಆಧಾರವನ್ನು ಒದಗಿಸುವ ಸಹಾಯಕ ಅಂಗವಾಗಿ ಕೆಲಸಮಾಡುತ್ತದೆ. ಫಲ್ಯಾಂಜರುಗಳ ಎಲ್ಲ ನಾಲ್ಕು ಕಾಲುಗಳಲ್ಲೂ ತಲಾ ಐದೈದು ಬೆರಳುಗಳಿವೆ. ಹೆಬ್ಬೆರಳು ವಿನಾ ಉಳಿದ ಬೆರಳುಗಳಲ್ಲಿ ಬಲವಾದ, ಬಾಗಿದ ನಖಗಳುಂಟು. ಇವುಗಳ ಸಹಾಯದಿಂದ ಫಲ್ಯಾಂಜರುಗಳು ಮರಗಳನ್ನು ಹತ್ತಬಲ್ಲವು. ಹೆಬ್ಬೆರಳು ನಖರಹಿತವಾಗಿದೆಯಾದರೂ ಉಳಿದ ಬೆರಳುಗಳಿಗೆ ಅಭಿಮುಖವಾಗಿರುವುದರಿಂದ (ಅಪೋಸಬಲ್) ರೆಂಬೆಗಳನ್ನು ಬಲವಾಗಿ ಹಿಡಿಯಲು ನೆರವಾಗುತ್ತದೆ.

	ಇವು ಪ್ರಧಾನವಾಗಿ ವೃಕ್ಷವಾಸಿಗಳು. ಕೆಲವೊಮ್ಮೆ ನೆಲದ ಮೇಲೂ ಓಡಾಡುತ್ತವೆ. ಚಿಗುರು, ಎಲೆ, ಹೂ, ಹಣ್ಣು, ಬೀಜ ಇವುಗಳ ಮುಖ್ಯ ಆಹಾರ, ಅನೇಕವೇಳೆ ಕೀಟಾದಿಗಳನ್ನೂ ಹಕ್ಕಿಗಳನ್ನೂ ಹಕ್ಕಿಮೊಟ್ಟೆಗಳನ್ನೂ ತಿನ್ನುವುದುಂಟು. 

	ಗಂಡು, ಹೆಣ್ಣು ಫಲ್ಯಾಂಜರುಗಳೆರಡರಲ್ಲೂ ಗುದದ್ವಾರದ ಬಳಿ ಒಂದು ಇಲ್ಲವೆ ಎರಡು ಜೊತೆ ವಾಸನಾಗ್ರಂಥಿಗಳಿವೆ. ಇವುಗಳಿಂದ ಒಸರುವ ವಸ್ತು ಕಟುವಾಸನೆಯುಳ್ಳದ್ದು. ಬಹುಶಃ ತಮ್ಮ ಚಟುವಟಿಕೆಯ ಕ್ಷೇತ್ರವನ್ನು ಗುರುತಿಸಿಕೊಳ್ಳಲು ಈ ವಸ್ತುವನ್ನು ಬಳಸಿಕೊಳ್ಳುತ್ತವೆ. ಗುರುಗುಟ್ಟುವುದು, ಒಂದು ರೀತಿ ಬಗುಳುವುದು ಇವು ಮಾಡುವ ಸದ್ದುಗಳು.

	ಫಲ್ಯಾಂಜರುಗಳು ಸಾಧಾರಣವಾಗಿ ಒಂದು ಸಲಕ್ಕೆ ಮೂರು ಮರಿಗಳನ್ನು ಈಯುತ್ತವೆ. 4-5 ತಿಂಗಳತನಕ ಮರಿಗಳನ್ನು ತಮ್ಮ ಸಂಚಿಯಲ್ಲೆ (ಮಾಸ್ರ್ಯೂ ಪಿಯಮ್) ಇಟ್ಟುಕೊಂಡು ಸಲಹುತ್ತವೆ. ಅನಂತರ ಮರಿಗಳು ತಾಯಿಯಿಂದ ಬೇರ್ಪಟ್ಟು ಸ್ವಾವಲಂಬಿಗಳಾಗಿ ಬದುಕಲು ಸಮರ್ಥವಾಗಿರುವುವಾದರೂ ಕೆಲಕಾಲ ತಾಯಿಯೊಡನೆಯೇ ಇದ್ದು ಅದರ ಬೆನ್ನ ಮೇಲೆ ಸವಾರಿಮಾಡುತ್ತ ಕಾಲಕಳೆಯುವುವು. ಸುಮಾರು 15-18 ತಿಂಗಳ ವಯಸ್ಸಿನವಾದ ತರುವಾಯ ಮರಿಗಳು ಲೈಂಗಿಕ ಪ್ರಬುದ್ಧತೆಯನ್ನು ಪಡೆಯುವುವು. ಫಲ್ಯಾಂಜರುಗಳ ಗರಿಷ್ಟ ವಯೋಮಿತಿ 13 ವರ್ಷ. 

	ಹಾವು, ನರಿ, ಬೆಕ್ಕುಗಳು ಇವುಗಳ ಮುಖ್ಯ ಸ್ವಾಭಾವಿಕ ಶತ್ರುಗಳು. ಇವುಗಳ ತುಪ್ಪುಳು ಬೆಲೆಬಾಳುವಂಥಾದ್ದರಿಂದ ಅದಕ್ಕಾಗಿ ಇವನ್ನು ಬೇಟೆಯಾಡುವುದಿದೆ.
	(ಎಚ್.ಎಚ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ